ಬೆಂಗಳೂರು: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಗಣನೀಯವಾಗಿ ಕುಸಿದಿದ್ದು, ಶೇ 63.56ರಷ್ಟು ವಿದ್ಯಾರ್ಥಿಗಳು ಮಾತ್ರ ಉತ್ತೀರ್ಣರಾಗಿದ್ದಾರೆ. ಈ ಬಾರಿಯೂ ನಗರ ಪ್ರದೇಶಕ್ಕಿಂತ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ಫಲಿತಾಂಶದಲ್ಲಿ ಮೇಲುಗೈ ಸಾಧಿಸಿದ್ದಾರೆ.
ಹಿಂದಿನ ವರ್ಷ ಒಟ್ಟಾರೆ ಶೇ 70.22ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ, ಈ ವರ್ಷ ಶೇ 63.56ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಹೊಸಬರಲ್ಲಿ ಉತ್ತೀರ್ಣ ಪ್ರಮಾಣ ಶೇ 68.77ರಷ್ಟಿದೆ. ಒಟ್ಟಾರೆ ಈ ವರ್ಷ ಉತ್ತೀರ್ಣ ಪ್ರಮಾಣ ಶೇ 6.66ರಷ್ಟು ಕಡಿಮೆಯಾಗಿದೆ. ಅತಿ ಹೆಚ್ಚು ಅಂದರೆ 619 ಅಂಕಗಳನ್ನು ಮೂವರು ವಿದ್ಯಾರ್ಥಿಗಳು ಪಡೆದಿದ್ದಾರೆ.
ಪುನರಾವರ್ತಿತ ಅಭ್ಯರ್ಥಿಗಳಲ್ಲಿ ತೇರ್ಗಡೆ ಪ್ರಮಾಣ ಶೇ 21.56ರಷ್ಟು ಇದ್ದರೆ, ಖಾಸಗಿ ಅಭ್ಯರ್ಥಿಗಳ ಉತ್ತೀರ್ಣ ಪ್ರಮಾಣ 07.26ರಷ್ಟಿದೆ. 86 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ. ಜಿಲ್ಲಾವಾರು ಫಲಿತಾಂಶದಲ್ಲೂ ಈ ವರ್ಷ ಸಾಕಷ್ಟು ಏರು-ಪೇರುಗಳಾಗಿವೆ.
ಏಪ್ರಿಲ್‌ನಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಗುರುವಾರ ಮಧ್ಯಾಹ್ನ 2 ಗಂಟೆಗೆ ಸಂಬಂಧಪಟ್ಟ ಶಾಲಾ-ಕಾಲೇಜುಗಳಲ್ಲಿ ಪ್ರಕಟವಾಗಲಿದೆ. ಬೆಳಿಗ್ಗೆ 7 ಗಂಟೆಯಿಂದ ವೆಬ್‌ಸೈಟ್‌ನಲ್ಲಿ ಫಲಿತಾಂಶ ಲಭ್ಯವಾಗಲಿದೆ ಎಂದು ಫಲಿತಾಂಶದ ವಿವರಗಳನ್ನು ನೀಡಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.
ಎಂದಿನಂತೆ ಬಾಲಕರಿಗಿಂತ, ಬಾಲಕಿಯರ ತೇರ್ಗಡೆ ಪ್ರಮಾಣ ಹೆಚ್ಚಾಗಿದೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಪ್ರಥಮ ಸ್ಥಾನ ಪಡೆದಿದ್ದರೆ, ಬೀದರ್ ಕೊನೆಯ ಸ್ಥಾನದಲ್ಲಿದೆ. ಕಳೆದ ವರ್ಷ 22ನೇ ಸ್ಥಾನದಲ್ಲಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆ ಈ ವರ್ಷ ಎರಡನೇ ಸ್ಥಾನಕ್ಕೆ ಏರುವ ಮೂಲಕ ಅಚ್ಚರಿ ಮೂಡಿಸಿದೆ. ಹಿಂದಿನ ವರ್ಷ ಎರಡನೇ ಸ್ಥಾನದಲ್ಲಿದ್ದ ಮಂಡ್ಯ ಈ ಸಲ ಮೂರನೇ ಸ್ಥಾನದಲ್ಲಿದೆ.
ಹಿಂದಿನ ವರ್ಷ ಪ್ರಥಮ ಸ್ಥಾನದಲ್ಲಿದ್ದ ಉಡುಪಿ ಜಿಲ್ಲೆ ಈ ಬಾರಿ ನಾಲ್ಕನೇ ಸ್ಥಾನದಲ್ಲಿದೆ. ಅದೇ ರೀತಿ ನಾಲ್ಕನೇ ಸ್ಥಾನದಲ್ಲಿದ್ದ ದಕ್ಷಿಣ ಕನ್ನಡ ಜಿಲ್ಲೆ ಈ ಸಲ ಎಂಟನೇ ಸ್ಥಾನದಲ್ಲಿದೆ. 10ನೇ ಸ್ಥಾನದಲ್ಲಿದ್ದ ಗದಗ ಈ ಸಲ 33ನೇ ಸ್ಥಾನಕ್ಕೆ ಕುಸಿದಿದೆ.
ನಗರ ಪ್ರದೇಶದ ವಿದ್ಯಾರ್ಥಿಗಳ ತೇರ್ಗಡೆ ಪ್ರಮಾಣ ಶೇ 65.33ರಷ್ಟು ಇದ್ದರೆ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ತೇರ್ಗಡೆ ಪ್ರಮಾಣ ಶೇ 67.88ರಷ್ಟಿದೆ. ಪರೀಕ್ಷೆಗೆ ಕುಳಿತಿದ್ದ 8,20,778 ಅಭ್ಯರ್ಥಿಗಳ ಪೈಕಿ 5,21,658 ಅಭ್ಯರ್ಥಿಗಳು ಪಾಸಾಗಿದ್ದಾರೆ.
ಬಾಲಕರ ಉತ್ತೀರ್ಣ ಪ್ರಮಾಣ ಶೇ 59.69ರಷ್ಟು ಇದ್ದರೆ, ಬಾಲಕಿಯರ ಉತ್ತೀರ್ಣ ಪ್ರಮಾಣ ಶೇ 67.98ರಷ್ಟಿದೆ. ಪರಿಶಿಷ್ಟ ಜಾತಿ/ಪಂಗಡದ ವಿದ್ಯಾರ್ಥಿಗಳ ತೇರ್ಗಡೆ ಪ್ರಮಾಣ ಒಟ್ಟಾರೆ ಫಲಿತಾಂಶಕ್ಕಿಂತ ತುಂಬಾ ಕಡಿಮೆ. ಪರಿಶಿಷ್ಟ ಜಾತಿಯ ಶೇ 56.93ರಷ್ಟು ಹಾಗೂ ಪರಿಶಿಷ್ಟ ಪಂಗಡದ ಶೇ 57.76ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಪ್ರವರ್ಗ-1ರ ಶೇ 63.28ರಷ್ಟು ವಿದ್ಯಾರ್ಥಿಗಳು ಹಾಗೂ ಇತರೆ ವರ್ಗಗಳ ಶೇ 70.14ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಇಲ್ಲೂ ಬಾಲಕಿಯರು ಮೇಲುಗೈ ಪಡೆದಿದ್ದಾರೆ.
ಹಿಂದಿನ ವರ್ಷಗಳಲ್ಲಿ ವಸ್ತುನಿಷ್ಠ ಮಾದರಿಯ ಪ್ರಶ್ನೆಗಳು ಹೆಚ್ಚಾಗಿ ಇರುತ್ತಿದ್ದವು. ಆದರೆ ಈ ವರ್ಷದಿಂದ ಪ್ರಶ್ನೆ ಪತ್ರಿಕೆ ಸ್ವರೂಪ ಬದಲಾಗಿದ್ದು, ಶೇ 75ರಷ್ಟು ಪ್ರಶ್ನೆಗಳಿಗೆ ವಿವರಣೆ ರೂಪದ ಉತ್ತರಗಳನ್ನು ಬರೆಯುವ ಹೊಸ ವಿಧಾನವನ್ನು ಜಾರಿಗೆ ತರಲಾಗಿತ್ತು. ಫಲಿತಾಂಶ ಕುಸಿತಕ್ಕೆ ಇದು ಸಹ ಕಾರಣ ಇರಬಹುದು ಎಂದು ಅಂದಾಜಿಸಲಾಗಿದೆ.
ಶೇ 100ರಷ್ಟು ಫಲಿತಾಂಶ: 814 ಶಾಲೆಗಳಲ್ಲಿ ಶೇ 100ರಷ್ಟು ಫಲಿತಾಂಶ ಬಂದಿದೆ. ಇವುಗಳಲ್ಲಿ ಸರ್ಕಾರಿ ಶಾಲೆಗಳ ಸಂಖ್ಯೆ 155. ಖಾಸಗಿ ಅನುದಾನರಹಿತ 608 ಶಾಲೆಗಳು ಹಾಗೂ ಅನುದಾನಿತ 51 ಶಾಲೆಗಳು ಶೇ 100ರಷ್ಟು ಫಲಿತಾಂಶ ಗಳಿಸಿವೆ. ಆದರೆ ಬೀದರ್ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಒಂದು ಶಾಲೆಯೂ 100ರಷ್ಟು ಫಲಿತಾಂಶ ಗಳಿಸಿಲ್ಲ. ಕಳೆದ ವರ್ಷ 827 ಶಾಲೆಗಳಲ್ಲಿ ಶೇ 100ರಷ್ಟು ಫಲಿತಾಂಶ ಬಂದಿತ್ತು.
ಪ್ರಥಮ ಭಾಷೆಯಲ್ಲಿ 285, ದ್ವಿತೀಯ ಭಾಷೆಯಲ್ಲಿ 17, ತೃತೀಯ ಭಾಷೆಯಲ್ಲಿ 59, ಗಣಿತದಲ್ಲಿ 127, ವಿಜ್ಞಾನದಲ್ಲಿ 27 ಹಾಗೂ ಸಮಾಜ ವಿಜ್ಞಾನದಲ್ಲಿ 41 ವಿದ್ಯಾರ್ಥಿಗಳು 100ಕ್ಕೆ 100ರಷ್ಟು ಅಂಕಗಳನ್ನು ಪಡೆದಿದ್ದಾರೆ.
ಶೂನ್ಯ ಫಲಿತಾಂಶ: ಒಟ್ಟು 86 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದ್ದು, ಇದರಲ್ಲಿ ಎರಡು ಸರ್ಕಾರಿ ಶಾಲೆಗಳು ಸೇರಿವೆ. ಏಳು ಅನುದಾನಿತ ಪ್ರೌಢಶಾಲೆಗಳಾಗಿದ್ದು, ಉಳಿದವು ಅನುದಾನರಹಿತ ಶಾಲೆಗಳಾಗಿವೆ. ಹಿಂದಿನ ವರ್ಷ 35 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿತ್ತು. ಇದಕ್ಕೆ ಕಾರಣ ಏನು ಎಂಬುದನ್ನು ತಿಳಿದುಕೊಂಡ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಕಾಗೇರಿ ತಿಳಿಸಿದರು. ಹೊಸದಾಗಿ ಪರೀಕ್ಷೆಗೆ ಕುಳಿತಿದ್ದ ಅಭ್ಯರ್ಥಿಗಳನ್ನು ಗಣನೆಗೆ ತೆಗೆದುಕೊಂಡರೆ ಸರ್ಕಾರಿ ಶಾಲೆಗಳಲ್ಲಿ ಉತ್ತೀರ್ಣ ಪ್ರಮಾಣ ಶೇ 63.31, ಅನುದಾನಿತ ಶಾಲೆಗಳಲ್ಲಿ ಶೇ 68.80 ಹಾಗೂ ಅನುದಾನರಹಿತ ಶಾಲೆಗಳಲ್ಲಿ ಶೇ 77.57ರಷ್ಟು ಇದೆ.
ಶೇ 80ಕ್ಕಿಂತ ಹೆಚ್ಚಿನ ಫಲಿತಾಂಶ: 968 ಅನುದಾನಿತ, 1,434 ಸರ್ಕಾರಿ ಹಾಗೂ 2,241 ಅನುದಾನರಹಿತ ಶಾಲೆಗಳಲ್ಲಿ ಶೇ 80ಕ್ಕಿಂತ ಹೆಚ್ಚಿನ ಫಲಿತಾಂಶ ಬಂದಿದೆ. 384 ಅನುದಾನಿತ, 550 ಸರ್ಕಾರಿ ಮತ್ತು 557 ಅನುದಾನರಹಿತ ಶಾಲೆಗಳಲ್ಲಿ ಶೇ 40ಕ್ಕಿಂತ ಕಡಿಮೆ ಫಲಿತಾಂಶ ಬಂದಿದೆ.
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಕಾರ್ಯದರ್ಶಿ ಡಾ.ಆರ್.ಜಿ.ನಡದೂರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಶಶಿಧರ್, ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕ ಎಂ.ಎನ್.ಬೇಗ್ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಎಸ್ಸೆಸ್ಸೆಲ್ಸಿ ಫಲಿತಾಂಶ ವೆಬ್‌ಸೈಟ್‌ಗಳು www.kseeb.kar.nic.in www.karresults.kar.nic.in www.sslc.kar.nic.in www.ekalasala.com www.schools9.com www.indiaresults.com www.adhyapak.com www.oneindia.in www.thatskannada.com www.karnataka.com www.brightscholaredu.com nandana.edu.in www.innovaindia.com www.exametc.com |
No comments:
Post a Comment